Monday, June 23, 2014

ಏನೀ ಸ್ನೇಹ ಸಂಬಂಧ ಎಲ್ಲಿಯದೋ ಈ ಅನುಬಂಧ.. !!!

ನನ್ನ ಬಳಿಯಿರುವ ಸುತ್ತ ಮುತ್ತಲು ಇರುವ ಎಲ್ಲವನ್ನೂ ನಾ ಮಾತಾಡಿಸುವುದು ನನ್ನ ಜಾಯಮಾನಕ್ಕೆ ಬಂದು ಬಿಟ್ಟಿದೆ.. ಅಂತರಗಳು ಜಾಸ್ತಿಯಾಯಿತು.. ಕಾರಣಗಳು ಅತಿಯಾಯಿತು.. ಕಡೆಗೆ ಕಾರಣಕ್ಕೆ ಅಂತರಗಳು ಹೆಚ್ಚಾಯಿತು.. ಕಾರಣಾಂತರ ಎನ್ನುವ ಪದ ಹುಟ್ಟಿಯೇ ಬಿಟ್ಟಿತು..

ಹಲವಾರು ವಾರಗಳಿಂದ.. ಅರಿಯದ ಒತ್ತಡಗಳಿಂದ.. ನಾ ಪ್ರೀತಿಸುವ ನನ್ನ ಬೈಕನ್ನು ಹೊರಗೆ ಓಡಾಡಿಸಿಯೇ ಇರಲಿಲ್ಲ.. ಇಂದು ಕಚೇರಿಯಿಂದ ಮನೆಗೆ ಬರುವಾಗಲೇ ಯಾಕೋ ಅನ್ನಿಸಿತು ಇವತ್ತು ಏನಾಗಲಿ ಮುಂದೆ ಸಾಗುನೀ ಎನ್ನುವಂತೆ ಬೈಕನ್ನು ಹೊರಗೆ ತೆಗೆಯಲೇ ಬೇಕು ಎಂದು ನಿರ್ಧರಿಸಿದ್ದೆ.. "ಮಗಳು" ಕೂಡ ಯಾಕೋ ಮಂಕಾಗಿದ್ದು ಕಾರಣವಾಗಿತ್ತು..

ಮನೆಗೆ ಬಂದೆ.. ನನ್ನ ಪ್ರೀತಿಯ ಬೈಕಿನ ಮೇಲೆ ಕೈಯಾಡಿಸಿದೆ.. ಕನ್ನಡಿಯಲ್ಲಿ ನನ್ನ ನೋಡಿ ಮುಗುಳುನಗೆ ಕೊಟ್ಟಿತು... ಹೊರಗೆ ಹೊರಟೆ ಬಿಟ್ಟೆ.. ನನ್ನ ಎಲ್ಲಾ ಸಾಹಸಕ್ಕೆ ಹೆಗಲು ಕೊಟ್ಟು ಸಹಕರಿಸಿದ ಮಿತ್ರನನ್ನು ಹೊರಗೆ ಗಾಳಿಯಲ್ಲಿ ಸುತ್ತಾಡಿಸಿ ಬಂದು ನಿಲ್ಲಿಸಿದೆ... ಹಾಟ್ಸ್ ಆಫ್ ಶ್ರೀ ಎಂದಿತು ಬೈಕ್..

ಹೌದು ಸ್ನೇಹದ ಸೆಳೆತವೆ ಹಾಗೆ.. ಎಲ್ಲೋ ಇದ್ದ ಹಲವಾರು ಹಾಲಿನ ಮನಸಿನ ಹೃದಯಗಳನ್ನು ಜೇನಿನ ಜೊತೆ ಬೆರೆಸಿ.. "ಜೇನಿನ ಹೊಳೆಯೋ ಹಾಲಿನ  ಮಳೆಯೋ ಸುಧೆಯೋ ಈ ಲೋಕ ಸ್ನೇಹ ಲೋಕವೋ.." ಅನ್ನುವಂತೆ ಹಾಡಿಸಿಬಿಡುತ್ತದೆ..

ನಾನು ನನ್ನದು ನನ್ನಿಂದಲೇ... ಎನ್ನುವ ಈ ಕಾಲದಲ್ಲಿ ನಾವು ನಮ್ಮದು ನಮ್ಮಿಂದಲೇ ಅಲ್ಲ ಬದಲಿಗೆ ನಿಮ್ಮಿಂದಲೇ ಎನ್ನುತ್ತಾ "ನಲಿಯುತಾ ಹೃದಯ ಹಾಡನು ಹಾಡುವ" ಸ್ನೇಹಲೋಕದ ಮೃದು ಮನಸ್ಸುಗಳು ಒಂದು ಗೂಡಿನಲ್ಲಿ  ಕೂಡಲು ಶುರುವಾಗಿ ಐದು ಕಾರ್ತಿಕಗಳು ಆಗಿದ್ದವು (ಕಾರ್ತಿಕ ಮಾಸದಲಿ ದೀಪದ ಸಾಲುಗಳು ಸುಂದರ.. ಈ ಲೋಕದಲ್ಲಿ ಸ್ನೇಹದ ದೀವಿಗೆ ನೀಡುವ ಬೆಳಕು ಸುಂದರ.. ಹಾಗಾಗಿ ವಸಂತಗಳು ಅನ್ನುವ ಬದಲು ಕಾರ್ತಿಕ ಮಾಸ ಎಂದದ್ದು)

ಆ ಲೋಕದಲ್ಲಿ ಕಾಲಿಟ್ಟೊಡನೆ ಅರೆ.. ಆ ಅಣ್ಣ.. ಅರೆ ಈ ಬ್ರದರ್.. ಅರೆ ಅಕ್ಕ.. ಅರೆ ಸಿಸ್ಟರ್.. ಅರೆ ಸರ್ಜಿ.. ಹೀಗೆ ಮಧುರ ಬಾಂಧ್ಯವ ಉಕ್ಕಿ ಹರಿಯುತ್ತಿತ್ತು.. ಯಾಕೋ ಕಣ್ಣೆತ್ತಿ ನೋಡಿದೆ.. ಅಲ್ಲಿ ಹಾಕಿದ್ದ ಫಲಕ ನೋಡಿದೆ.. ತಲೆ ಅಲ್ಲಾಡಿಸೋಣ ಅಂದರೆ.. ಆಗಲೇ ಹೃದಯ ತುಂಬಿ ನಲಿದಾಡುತ್ತಿತ್ತು..

ಸ್ನೇಹದ ಜ್ಯೋತಿಯಲ್ಲಿ ಬೆಳಗುತ್ತಿರುವ ದೇವಾಲಯ

ಸ್ನೇಹಲೋಕದ ಸುಂದರ ಪರಿವಾರ ಸ್ನೇಹ ಜ್ಯೋತಿ ಆಶ್ರಮದಲ್ಲಿ ಐದನೇ ವಾರ್ಷಿಕೋತ್ಸವ ನಡೆಸಲು ನಿರ್ಧರಿಸಿದ್ದರು.. ಅದಕ್ಕೆ ಬೇಕಿದ್ದ ಸಿದ್ಧತೆಗಳು ಸಾಗಿದ್ದವು.. ಮಕ್ಕಳು ಸಂತಸದಿಂದ ಕುಣಿಯುತ್ತಿದ್ದವು.. ಅಣ್ಣಾ ಹಾಡು ಬೇಕು ಎನ್ನುತ್ತಿತು ಒಂದು ಮುಗ್ಧ ಮಗು.. ಹಾಕಿದಾಗ ತನ್ನಷ್ಟಕ್ಕೆ ತಾನೇ ಕುಣಿಯುತ್ತಿದ್ದವು..

ದೇವರನ್ನು ಹುಡುಕುವುದೇ ಬೇಡ.. ಇಲ್ಲಿ ಅನೇಕ ದೇವರುಗಳು ಓಡಾಡುತ್ತಿದ್ದವು ಮಕ್ಕಳ ರೂಪದಲ್ಲಿ.. ಬಣ್ಣ ಬಣ್ಣದ ಕನಸುಗಳನ್ನು ಹೊತ್ತ ಮಕ್ಕಳು ಬಣ್ಣ ಬಣ್ಣದ ಪೋಷಾಕುಗಳಲ್ಲಿ ಕುಣಿಯುತ್ತಿದ್ದವು. ಹಾಡು ಕುಣಿತ ಮಕ್ಕಳೊಡನೆ ಬೆರೆವ ಆ ಸುಂದರ ಸಮಯ ಹೋದದ್ದು ಅರಿವಾಗಿದ್ದು ತಿಳಿಯಲೇ ಇಲ್ಲ..

"ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು ಮುಂದಿನ ಬದುಕು ಬಂದುರವೆನಿಸೋ ಗುರಿಸಾಧಿಸೋ ಕಂದ" ಎಂದು ಅಣ್ಣಾವ್ರು ಹಾಡಿದ ಹಾಗೆ ಪ್ರತಿ ಕಂದನಲ್ಲೂ ಏನೋ ಒಂದು ಸೆಳೆವ ಶಕ್ತಿ ಕಾಣುತ್ತಿತ್ತು.. ಅಲ್ಲಿ ಬಂದ ಎಲ್ಲಾ ಸಹೃದಯರು ಮಕ್ಕಳ ಸ್ಥಾನಕ್ಕೆ ಇಳಿದು ಅವರೊಡನೆ ಬೆರೆತು ಮಾತಾಡಿದ್ದು ಕುಣಿದದ್ದು.. ಊಟ ಮಾಡಿದ್ದು ವಿಶೇಷ. ಆ ದೇವರ ಪ್ರತಿನಿಧಿಗಳಿಗೆ ಯಾವುದೇ ರೀತಿಯಲ್ಲೂ ಕೀಳರಿಮೆ ಮೂಡದಂತೆ ಅವುಗಳ ಬೆನ್ನು ತಟ್ಟಿ ಮಿಕ್ಕವರ  ಹೃದಯವನ್ನು ತಟ್ಟುವ ಕಾರ್ಯವನ್ನು ಎಲ್ಲರೂ ಮಾಡುತ್ತಿದ್ದರು.. ಆ ಮಕ್ಕಳಿಗೆ ಗುರು ತೋರಿಸುವ.. ಗುರಿ ಕಾಣಿಸುವ .. ಮನಸ್ಸಿಗೆ ಬಣ್ಣ ಬಣ್ಣದ ಕನಸುಗಳನ್ನು ಬಿತ್ತುವ ಕೆಲಸವನ್ನು ಮಾಡುತ್ತಿದರು.. ಮಕ್ಕಳಿಗೆ ಬೇಕಿರುವುದು ಬೆಳೆಸುವ ಕನಸು.. ಆ ಕನಸಿನ ಸಸಿಗೆ ನೀರೆರೆಯುವ ಕಾಯಕ ಸ್ನೇಹಲೋಕದ್ದು ಆಗಿತ್ತು ಎನ್ನುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯವಾಗಿತ್ತು ..

ಈ ಲೋಕದಲ್ಲಿ ನಾ ಕಾಣದ ಸುಂದರ ಚಹರೆಗಳು ಅಪಾರವಾಗಿದ್ದರೂ.. ಶ್ರೀಕಾಂತಣ್ಣ.. ಎನ್ನುತ್ತಾ ಆತ್ಮೀಯವಾಗಿ ಬರಮಾಡಿಕೊಂಡ ಸ್ನೇಹಲೋಕದ ಬಳಗಕ್ಕೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು..

ಲೋಕದ ಸ್ನೇಹದ ಮಂದೇ!!!!

ಕಾರ್ಯಕ್ರಮ ಶುರುವಾಗಿದ್ದು ಬೆಂಗಳೂರು ಮುಂಬಯಿಗೆ ಬಸ್ಸಿನಲ್ಲಿ ಓಡಾಡುವಂತೆ ಓಡಾಡುವ ಶ್ರೀ ಅಶೋಕ್ ಶೆಟ್ಟಿಯವರಿಂದ ಸ್ವಾಗತ ಭಾಷಣದಿಂದ .. ನಂತರ ದೂರದೂರಿಗ ಸತೀಶ್ ನಾಯಕ್ ಅವರಿಂದ ಅತಿಥಿಗಳ ಕಿರು ಪರಿಚಯ.. ನಂತರ ರಮೇಶ್ ಅವರಿಂದ ಕಾರ್ಯಕ್ರಮದ ಕಿರು ಪ್ರಸ್ತಾಪ. ನಂತರ ಸ್ನೇಹಲೋಕದ ಸುಂದರ ಪರ್ಪಂಚಕ್ಕೆ ಅಡಿಗಲ್ಲನಿಟ್ಟ ಮಂಜು ಮತ್ತು ಸುಮನ.. ಜೊತೆಯಲ್ಲಿ ಜೇನಿನ ಗೂಡಿನಲ್ಲಿ ದುಡಿವ ಜೇನು ಮರಿಗಳಂತೆ ಇರುವ ಅಶ್ವಥ್, ಮಲ್ಲೇಶ್, ಮಹೇಶ್, ಪ್ರಾಣಪಕ್ಷಿ, ಸತೀಶ್ ಕನ್ನಡಿಗ ಹೀಗೆ ಹೇಳುತ್ತಾ ಹೋದರೆ ಜೇನು ಗೂಡಿನ ಹನಿಗಳನ್ನು ಲೆಕ್ಕ ಹಾಕಿದ ಹಾಗೆ ಅಸಂಖ್ಯಾತ..

ಈ ಲೋಕ ಸ್ನೇಹ ಲೋಕ 
ಅತಿಥಿ ಸ್ಥಾನದಲ್ಲಿ ಆಸೀನರಾಗಿದ್ದ ಪ್ರಕಾಶಣ್ಣ, ಆಜಾದ್ ಸರ್,  ಬಾಲೂ ಸರ್, ಮಣಿಕಾಂತ್ ಸರ್.. ತಮ್ಮ ತಮ್ಮ ಅನುಭವ  ಪ್ರಪಂಚದಲ್ಲಿ ನಮ್ಮನ್ನು ನಡೆಸುತ್ತಾ ಬಂದರು.. "ಮಕ್ಕಳಿಗೆ ಗುರಿ ತೋರಿಸಿದರೆ ಸಾಕು... ಚಿಕ್ಕ ಚಿಕ್ಕ ಆಸರೆ ನೀಡಿದರೆ ಸಾಕು.. ಬಳ್ಳಿ ಮರಕ್ಕೆ ಹಬ್ಬಿ ಮರವನ್ನು ತಬ್ಬಿ ಮರಕ್ಕೂ ಆಸರೆಯಾಗಿ ಅದರ ಜೊತೆಯಲ್ಲಿ ಹೂವು ಹಣ್ಣಿಗೂ ಆಸರೆಯಾಗಿ ಮುಂದಿನ ಪೀಳಿಗೆಗೆ ಜೊತೆಯಾಗಿ ನಿಲ್ಲುವಂತೆ ಈ ಮಕ್ಕಳು ನಿಲ್ಲುತ್ತಾರೆ... ಅವರು ಸಾಧಕರಾಗಲಿ ಎನ್ನುವ ಆಶಯ ಎಲ್ಲರಲ್ಲೂ ಇದೆ ಎನ್ನುವ ಅವರ ಕಿವಿವಾಣಿ ಮಾರ್ಧನಿಸುವಂತೆ ಇತ್ತು..

ನಗೆ ಲೋಕದ ಸ್ನೇಹದ ಸರದಾರರು!!!

ಆ ಮಕ್ಕಳ ಆಗಮನದ ವಿಷಯವೇ ಬೇಡ.. ನಾವೆಲ್ಲರೂ ಈ ವಸುಂಧರೆಯಲ್ಲಿ ಕೆಲವು ಕಾರಣಗಳಿಗೋಸ್ಕರ ಬಂದಿದ್ದೇವೆ.. ಆ ಕಾರಣ ಒಳ್ಳೆಯದೋ ಕೆಟ್ಟದೋ ಅದು ಬೇಡವೇ ಬೇಡ.. ಭಗವಂತನ ದೃಷ್ಟಿಯಲ್ಲಿ ಎಲ್ಲವೂ ಒಂದೇ.. ಆ ಮಕ್ಕಳ ಏಳಿಗೆಯಲ್ಲಿ ಒಂದು ಚಿಕ್ಕ ಅಳಿಲು ಸೇವೆ ನಮ್ಮದು ಎನ್ನುವ ಉದಾರ ಮನೋಭಾವ ಈ ಸ್ನೇಹಲೋಕದ ಹೃದಯವಾಣಿಯಾಗಿತ್ತು.

ಸ್ನೇಹ ಒಂದು ನೂಲಿನ ಹಾಗೆ.. ಸುತ್ತಿದಷ್ಟು ಬಂಧ ಬಿಗಿಯಾಗುತ್ತದೆ ಮಿಕ್ಕವರನ್ನು ಸೆಳೆಯುತ್ತದೆ..

ಸ್ನೇಹದ ಬಂಧನ.. ಹೀಗೆ ಇರುತ್ತದೆ 

ಒಂದು ಬಾರಿ ಸ್ನೇಹ ಲೋಕದ ಸರಪಳಿಯಲ್ಲಿ ಸಿಕ್ಕವರು ಸ್ನೇಹಕ್ಕೆ ನಿಷ್ಟರಾಗಿರುತ್ತಾರೆ.. ಅದುವೇ ಸ್ನೇಹದ ತಾಕತ್..

ಸ್ನೇಹಕ್ಕೆ ನಿಷ್ಠೆ ಈ ಲೋಕದ ಶಕ್ತಿ 
ಸುಂದರ ಭೋಜನ, ಹೊಟ್ಟೆ ತುಂಬಾ ಮಾತು, ಕಣ್ಣಲ್ಲಿ ನೀರು ಬರಿಸುವಷ್ಟು ನಗು, ಕದಡಿದ ಮಾನಸ ಸರೋವರ ಮತ್ತೆ ತಿಳಿಯಾಗಲು ಈ ಸುಂದರ ಭಾನುವಾರ ಸಹಕಾರಿಯಾಗಿತ್ತು..

ಇದಕ್ಕೆ ಸಾಕ್ಷಿ ಬೇಕೇ.. ನೋಡಿ ಈ ಕೆಳಗಿನ ಚಿತ್ರಗಳನ್ನು... ಪದಗಳು ಕಟ್ಟಿ ಕೊಡಲಾರದ ಕತೆಗಳನ್ನು ಈ ಚಿತ್ರಗಳು ಪೋಣಿಸಿಕೊಡುತ್ತಿವೆ.
ಆಲಯ ದೇವಾಲಯ ದೇವರುಗಳು ಇರುವ ಆಲಯ 

ಮಕ್ಕಳ ಗುರಿಗೆ zoom ಹಾಕಲೇ ಬೇಕು!!!

ಸುಂದರ ದಿನಕ್ಕೆ ಸಿಹಿಯ ಮಿಶ್ರಣ

ಮಕ್ಕಳ ದೃಷ್ಟಿ ಗುರಿಯತ್ತ

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಪ್ರತಿಭಾ ಲೋಕಾ!!!

ಸಾಧನೆಯ ಕಡೆ ದೃಷ್ಟಿ!!! 

ನನ್ನ ಬೈಕಿನ ಹಾಗೆ ಅಲ್ಲಿನ ಎಲ್ಲಾ ಮಕ್ಕಳು ಕೂಡ ನಸು ನಗುತ್ತಾ ನಲಿದದ್ದು ಎಲ್ಲರ ಹೃದಯಗಳಲ್ಲಿ..  ಗೆಜ್ಜೆ ಕಟ್ಟಿ ಕುಣಿದ ಯಕ್ಷಗಾನ ಪಾತ್ರಧಾರಿಯ ಹಾಗೆ.. ಮನ ತುಂಬಿ ಬಂದಿತ್ತು.. ಮಕ್ಕಳ ಪ್ರತಿಭೆ ಅನಾವರಣ ಮಾಡುವ ಸುಂದರ ಕಾರ್ಯಕ್ರಮ ನಡೆದಿತ್ತು.. ತುಂಟ ನೃತ್ಯ, ಗಮನ ಸೆಳೆಯುವ ಸಮೂಹ ನೃತ್ಯ, ಸಾಧಕರಿಗೆ ದೃಷ್ಟಿ ಮುಖ್ಯ ಅಲ್ಲಾ.. ಸಾಧನೆಯ ಕಡೆಯಿರುವ ದೃಷ್ಟಿ ಮುಖ್ಯ ಎಂದು ಬಿಂಬಿಸುವ ಯೋಗಾಸನ..ಎಲ್ಲವೂ ಒಬ್ಬಟ್ಟು ತಿಂದಷ್ಟೇ ಸಂತೋಷವಾಗುತ್ತಿತು.

ಸ್ನೇಹಕ್ಕೆ ಅಂತರ ಬೇಡ.. ಕಾರಣಗಳು ಬೇಡ.. ಆ ಲೋಕದಲ್ಲಿ ಬೇಕಿರುವುದು ಕಣ್ಣಲ್ಲಿ ಇಣುಕುವ ಮಿಂಚು.. ಮೊಗದಲ್ಲಿ ಕಾಣುವ ಹಲ್ಲಿನ ಕೋಲ್ಮಿಂಚಿನ ನಗೆ.. ಹೃದಯದಲ್ಲಿ ಬೆಚ್ಚನೆ ಗೂಡು ಕಟ್ಟಿಕೊಳ್ಳುವ ಬಾಂಧ್ಯವ.

ಇವೆಲ್ಲ ಇರುವ ತಾಣ ಸ್ನೇಹಲೋಕ ತಾಣ.. ಅದಕ್ಕೆ ಈ ಲೋಕ ಸದಾ ನಂಬರ್ ಒನ್ ಲೋಕ

ಸ್ನೇಹ ಲೋಕ ಯಾವಾಗಲೂ ಒಂದು... !

ಎಲ್ಲಾ ಸ್ನೇಹ ಲೋಕ ತಾಣದ ಸದಸ್ಯರಿಗೆ ಅವರ ಅಹರ್ನಿಶಿ ಸೇವಾ ಮನೋಭಾವಕ್ಕೆ ಶಿರಸಾ ನಮಿಸಿ ಶುಭ ಹಾರೈಸುವೆ..

ಇಂಥ ಒಂದು ಲೋಕ ಹೀಗೆ ಇರುವುದೇ ಎನ್ನುವ ಪುರಾವೆ ಬೇಕೇ... ನೋಡಿ ಇಲ್ಲಿದೆ

ಈ ಲೋಕಕ್ಕೆ ಚಿನ್ಹೆ ಬೇಕೇ.. ಹುಡುಕಲೇ ಬೇಡಿ ಇಲ್ಲೇ ಇದೆ ನೋಡಿ 

ಒಂದು ಸುಂದರ ರವಿವಾರವನ್ನು ಕೊಟ್ಟ ನಿಮಗೆ ನನ್ನ _____________/\___

Sunday, June 8, 2014

DFR - "ಅಮ್ಮನ ಕೃಪೆ"..

ಕೆಲವೊಮ್ಮೆ ಹೀಗೂಮ್ಮೆ ಹಾಗೊಮ್ಮೆ ಅನ್ನಿಸುತ್ತದೆ..

ಆಲದ ಮರ ತನ್ನ ಬಿಳಲುಗಳನ್ನ ಭೂಮಿಗೆ ತಾಕಿಸಿ ಮತ್ತೊಂದು ಸಸಿಗೆ ಉತ್ಸಾಹ ತುಂಬುತ್ತದೆ.. ಅದರ ಮೂಲ ಹುಡುಕುತ್ತಾ ಹೋದರೆ ಮೂಲೆ ಮೂಲೆಯಲ್ಲೂ ಕಾಣೋದು ಬರಿ ಆತ್ಮ ವಿಶ್ವಾಸ, ಅಕ್ಕರೆ, ಮಧುರ ಮಧುರ ಸಿಹಿ ನೆರಳುಗಳು..

ಆ ಆಲದ ಮರದ ಬೆಚ್ಚನೆಯ ರೆಂಬೆ ಕೊಂಬೆಗಳಲ್ಲಿ ಕೂತು ಗಾನ ಲಹರಿ ಪಸರಿಸುವ ಹಕ್ಕಿ ಪಿಕ್ಕಿಗಳು ಹೇಳುತ್ತವೆ

ಓ ಮೈನಾ ಓ ಮೈನಾ, ಏನಿದು ಮಾಯೆ

ಮೋಡಗಳೆಲ್ಲಾ ಒಗ್ಗಟ್ಟಾಗಿ ನಿಂತು ಈ ಆಲದ ಮರಕ್ಕೆ ನೀರೆಯಲು ಸಜ್ಜಾಗಿದ್ದಾಗ.. ಅಲ್ಲಿಯೇ ಸುಯ್ ಎಂದು ಬೀಸುವ ಗಾಳಿ ಉಲಿಯುತ್ತದೆ

ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೆ

ಆ ಮಳೆಹನಿಗೆ ಕಾತುರದಿಂದ ಕಾಯುತ್ತಿರುವ ಭೂರಮೆಯ ಸಸ್ಯ ಸಂಕುಲಗಳು ಅರೆ ಈ ಕಾಯುವಿಕೆಯನ್ನು ಹೀಗೆ ಹಾಡಬಹುದೇ ಅನ್ನುತ್ತ ತಮ್ಮಲ್ಲೇ ಗುನುಗುನಿಸುತ್ತಾ ಇರುತ್ತವೆ...

ನೆನ್ನೆ ಕಂಡ ನೋಟವೇ ಅಂತರಾಳವಾಗಿದೆ
ಇಂದು ಕಂಡ ನೋಟವೇ ಗಟ್ಟಿಮೇಳವಾಗಿದೆ
ರಾಗ ಎನ್ನಲೇ, ಅನುರಾಗ ಎನ್ನಲೇ
ಪ್ರೀತಿಯೆನ್ನಲೇ, ಹೊಸಮಾಯೆ ಎನ್ನಲೇ

ಸಸ್ಯ ಸಂಕುಲಗಳು.. ಪ್ರತಿ ಮರಳಿನ ಕಣಗಳನ್ನು ಜಪಿಸುತ್ತಾ.. ಪ್ರಾರ್ಥನೆಯೊಂದಿಗೆ ಹೇಳುತ್ತವೆ..

ಕಾವೇರಿ ತೀರದಲಿ ಬರೇದೆನು ನಿನ್ ಹೆಸರ
ಆ ಪ್ರಾರ್ಥನೆಯಿಂದ.. ದೇವರ ಕೃಪೆಯಿಂದ ಮರಳೆಲ್ಲ ಹೊನ್ನಾಯ್ತು, ಯಾವ ಮಾಯೇ

ಮಳೆ ಬಂತು, ಮರಳೆಲ್ಲ ಹೊನ್ನಾಯ್ತು.. ಪ್ರಾಣಿ ಪಕ್ಷಿಗಳ ಸಸ್ಯ ಸಂಕುಲಗಳ ಸಂತಸಕ್ಕೆ ಹಿನ್ನೆಲೆ ಸಂಗೀತ ಇದ್ದಿದ್ದರೆ ಎಂದು ಕಾತುರತೆಯಿಂದ ಕಾಯುತ್ತಾ ಕೂತಿದ್ದಾಗ.. ಅಶರೀರವಾಣಿ ಮೊಳಗುತ್ತದೆ..

ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲ ಕೊಳಲಾಯ್ತು, ಯಾವ ಮಾಯೇ

ಕೊಳಲಿನ ನಾದಕ್ಕೆ ಮನ ಸೋಲದ ತನುವಿಲ್ಲ ಎನ್ನುವ ಹಾಗೆ.. ಆಕಾಶದಲ್ಲಿ ಹಾರುತ್ತಿರುವ ಅನುಭವ.. ಮನಸ್ಸು ಹೇಳುತ್ತದೆ

ಸೂತ್ರವು ಇರದೇ, ಗಾಳಿಯು ಇರದೇ
ಬಾನಲಿ ಗಾಳಿಪಟವಾಗಿರುವೇ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ

ನಾದಕ್ಕೆ ಮಾಧುರ್ಯಕ್ಕೆ ಮೈ ಮರೆತ ಬಳಗ.. ಕಣ್ಣು ಬಿಟ್ಟು ನೋಡಿದರೆ ಅಲ್ಲಿ ಸರಸ್ವತಿ ಲೋಕದ ಸಭಿಕರೆಲ್ಲಾ ತುಂಬಿದ್ದಾರೆ.. ಅರೆ ಇದೇನು ಮಾಯೆ.. ಶಾರದ ಲೋಕಕ್ಕೆ ಹೋಗೋಣ ಅಂದ್ರೆ.. ಶಾರದೆಯ ಲೋಕವೇ ಬಂದು ಬಿಟ್ಟಿದೆ... ಇದೆಂಥ ಮಾಯೆ.. ಓಹ್ ಇದು ಕೂಡ ಹೀಗೆ ಇರಬೇಕು ಅನ್ನುತ್ತಾ ನಾಲಿಗೆಯಲ್ಲಿ ಪದಗಳು ಹರಿದು ಬರುತ್ತಿವೆ

ಬೇಡನ ಕಣ್ಣಿಗೆ ಬಾಣವ ನಾಟಿಸುವ
ಈ ಜಿಂಕೆಬೇಟೆಯಲ್ಲಿ ಯಾವ ಮಾಯೇ
ಹತ್ತಿಗೆ ಬೆಂಕಿಯನು ಹತ್ತಿಸುವ ಮಾಯೆ
ಮೀನುಗಳೆ ಗಾಳ ಬೀಸೋ ಯಾವ ಮಾಯೆ
ಆಕಾಶಕ್ಕೆ ಬಲೆಯಾ ಬೀಸಿ
ಮೋಡ ನಗುವಾ ಮರ್ಮಾ ಏನೋ
ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ

ಹೀಗೆ.....  ಒಂದು ಆಲದ ಮರ ತಾನಷ್ಟೇ ಬೆಳಯದೆ ತನ್ನ ಸುತ್ತ ಮುತ್ತಲು ಸಿಕ್ಕದ್ದನ್ನೆಲ್ಲ ಸೇರಿಸಿಕೊಂಡು ಬೆಳೆಯುವ ಹಾಗೆ .... ಆಶ್ರಯ ನೀಡುವ ಹಾಗೆ.. ನಮ್ಮೆಲ್ಲರ ಮಧ್ಯೆ ಇರುವ ಒಂದು ಆಲದ ಮರ ನಮ್ಮ DFR.- Devine Friend Roopa.
ತಾನು ಬೆಳೆದು.. ಇತರರನ್ನು ಬೆಳೆಸಿ.. ಅವರ ಬೆಳವಣಿಗೆಯಲ್ಲಿ ಸಂತಸಕಾಣುವ ಮನಸ್ಸು ಇವರದ್ದು..

ಏನೇ ಬರಲಿ.. ಹೀಗೆ ಇರಲಿ ... ಹೇಗೆ ಇರಲಿ.. 
೩ಕ ನನ್ನ ಬೆನ್ನ ಹಿಂದೆ.. 
ನಗು ನನ್ನ ಮುಂದೆ 

ಕಾಳಿಕಾ ಮಾತೆಯ ಮುಂದೆ ನಿಂತ ಕಾಳಿದಾಸನ ಹಾಗೆ...
ಇವರನ್ನು ಹೇಗೆ ಕರೆಯಲಿ...  ಕೂಗಲಿ ಎಂಬ ಗೊಂದಲ ಇದ್ದಾಗ.. ತಾಯಿಯನ್ನು ಮಗು ಹೇಗೆ ಕರೆದರೂ ಮಾತೆಗೆ ಸಂತೋಷವೇ ಅಲ್ಲವೇ ಎಂಧು ಮನಸ್ಸನ್ನು ಸಮಾಧಾನ ಪಡಿಸಿಕೊಂಡಿತು..

ಅಮ್ಮ ಎನ್ನುವ ಒಂದು ಪದವೇ ಶಕ್ತಿ ಕೊಡುತ್ತದೆ..  "ಅಮ್ಮನ ಕೃಪೆ"ಯಿಂದ ಮಣಿಕಟ್ಟಿನ ಮೇಲೆ ಮೂಡಿರುವ ಆ ಹೆಸರು ಇನ್ನಷ್ಟು ಭಾವ ಉಕ್ಕಿಸಲು ಅನುವು ಮಾಡಿಕೊಡುತ್ತದೆ.. ಮುದ್ದು ಪುಟಾಣಿ ಅಕ್ಕರೆಯ ಮೋಡಗಳ ಮಾಲೆ "ಮೇಘನ" ಇವರನ್ನು ಒಳಗೊಂಡ ಹಸಿರು ಉಸಿರಿಗೆ ಅನ್ವರ್ಥವಾಗಿರುವ ಹೆಸರು "ರೂಪ ಸತೀಶ್"..

"ಯಾವ ಕವಿಯೂ ಬರೆಯಲಾರ ಒಲವಿನಿಂದ ಕಣ್ಣೋಟದಿಂದ" ಎನ್ನುವ 
ಅಣ್ಣಾವ್ರ ಹಾಡಿನಂತೆ ಹೃದಯದಲ್ಲಿದ್ದ ಮಮತೆ ಕರದಲ್ಲಿ ಮೂಡಿಬಂದಿದೆ.. . 

ಅಕ್ಷರಗಳು, ಅಕ್ಷರಗಳ ವಯ್ಯಾರ ಅದರಲ್ಲಿ ಇಣುಕುವ ಮಮತೆ .... 
ಜೀವನದಲ್ಲಿ ಕಷ್ಟಕ್ಕೆ ಸುಖಕ್ಕೆ ತಲೆಬಾಗುವುದನ್ನು ಕಲಿಸಿದ 
ಅಮ್ಮನ ಹೆಸರು ಮಡಿಸುವ ಭಾಗದಲ್ಲಿದ್ದರೆ ... 

ಜೀವನದಲ್ಲಿ ಬರುವ ಎಲ್ಲ ಸಾಧನೆಗಳಿಗೂ, ಪರೀಕ್ಷೆಗಳಿಗೂ ನೆಟ್ಟಗೆ 
ನಿಲ್ಲಬೇಕೆಂದು
 ಕಲಿಸುವ ಪಾಠ ಬಾಗುವುದಕ್ಕಾಗದ ಭಾಗದಲ್ಲಿದೆ.. 

ಕಲಿಸಿದ ಪಾಠ.... ಕಲಿಸುವ ಪಾಠ ಇವರೆಡರ ಮಧ್ಯೆ ನಿಲ್ಲುವುದೇ 
ಮಮತೆ, ಪ್ರೀತಿ, ಮಮಕಾರ.. ಅದರ ಚಿನ್ಹೆ ಅದರ ಮಧ್ಯೆ!

ಇವರ ಸಾಧನೆಯ ಒಂದು ಮಜಲು "ಅಮ್ಮನ ಕೃಪೆ".. ಸಂತಸ ನೆಮ್ಮದಿ ಸುಖ ಶಾಂತಿ ಎಲ್ಲವಕ್ಕೂ  ಅಮ್ಮನ ಕೃಪೆ ತವರೂರಾಗಿರಲಿ ಎಂಬ ಹಾರೈಕೆಯೊಂದಿಗೆ ಸಮಸ್ತ ಬ್ಲಾಗ್ ಕುಟುಂಬದಿಂದ ಗೃಹಪ್ರವೇಶದ ಈ ಸಮಾರಂಭಕ್ಕೆ ಅಭಿನಂದನೆಗಳು..
"ರತ್ನ"ದ "ರಾಜ"ಮನೆತನದ ಅಂತರಂಗದಿಂದ ಅರಳಿದ 
"ರೂಪ" ರಾಶಿಯನ್ನು ನೋಡಿದ "ಮೇಘ"ಮಾಲೆ ಸುರಿಸಿತು 
ಆನಂದ ಭಾಷ್ಪ...
ಅದನ್ನು ಕಂಡ ಪರಶಿವ ಹರಸಿ ಪರವಶನಾದ 
ಆ ಕ್ಷಣವೇ ಆಯಿತು ತ್ರಿ"ವೇಣಿ" ಸಂಗಮ 
ರತ್ನದ ರೂಪದಲ್ಲಿ ಮೇಘ...!!! 
ಮೂರು ತಲೆಮಾರಿನ ಸುಂದರ ಹೂವುಗಳು...
ಇದಲ್ಲವೇ ಧನ್ಯತೆ ಎಂದರೆ...!! !ಸುಂದರ ಚಿತ್ರ ರೂಪ!!!

DFR ನಿಮ್ಮಂತಹ ಸಹೃದಯ ಮಿತ್ರರ ಸಂಖ್ಯೆ ಅಗಣಿತವಾಗಿರಲಿ... ಅವಿರತವಾಗಿರಲಿ..

ಸುಂದರ ಸಮಾರಂಭಕ್ಕೆ ಅಭಿನಂದನೆಗಳು!!!