Saturday, November 30, 2013

ಶಶಿಯ ಅ"ಪ್ರತಿಭಾ" ಪಯಣ ಹದಿನೈದರ ಹರಯದಲ್ಲಿ!!!

ಆಗ ತಾನೇ ಕಾಲೇಜು ತುಳಿದಿದ್ದ ದಿನಗಳು. ಶಾಲೆಯ ಬಂಧನ ಎನ್ನುವಂತ ಪರಿಸರದಿಂದ ಮುಕ್ತವಾದ ಬಯಲಿಗೆ ಬಿದ್ದಂತೆ ಅನುಭವವಾದ ದಿನಗಳು. ಸಮವಸ್ತ್ರ, ಬೂಟ್ಸ್, ಚೀಲ ಇದರಿಂದ ಮುಕ್ತಿ ಹೊಂದಿದ್ದ ದಿನಗಳು. ಮನದೊಳಗೆ ಇಳಿಬಿದ್ದಿದ್ದ ಆಸೆಗಳು ಗರಿಗೆದರಿ ಹಾರಲು ಸಿದ್ಧವಾಗುತ್ತಿದ್ದ ದಿನಗಳು. "ಮನದಲ್ಲಿ ಆಸೆಯೇ ಬೇರೆ ಬದುಕಲ್ಲಿ ನಡೆವುದೇ ಬೇರೆ" ಎನ್ನುವ ಮೋಡದ ಮರೆಯಲ್ಲಿ ಚಿತ್ರದ ಹಾಡಿನಂತೆ ಅರ್ಥಿಕ ಮುಗ್ಗಟ್ಟು ಇದ್ದುದರಿಂದ ಬರಿ ಓದುವುದಷ್ಟಕ್ಕೆ ಸೀಮಿತವಾಗಿತ್ತು.

ಆ ದಿನಗಳಲ್ಲಿ ಬೈಕ್ ಕಲಿಯಬೇಕು.. ಓಡಿಸಬೇಕು.. ಎನ್ನುವ ಚಪಲವಿದ್ದರೂ ಸಂಕೋಚ ಸ್ವಭಾವದ ಎಲೆಮರೆಯ ಕಾಯಿಯ ಗುಣದ ನಾನು ಬೈಕ್ ಓಡಿಸುವಿದರಲಿ ನೋಡುವ ಸಾಹಸ ಕೂಡ ಮಾಡುತ್ತಿರಲಿಲ್ಲ. ಇನ್ನೂ ಮೀಸೆ ಚಿಗುರದ ಚಿಕ್ಕ ಪುಟ್ಟ ಹುಡುಗರೆಲ್ಲಾ ಬೈಕ್ ಓಡಿಸುವುದನ್ನು ಕಂಡಾಗ ಮನದಲ್ಲಿ ನಾಚಿಕೆಯಾಗುತ್ತಿದ್ದರು ಮಿತಿಯ ಅರಿವಿದ್ದವ ತಿಮಿರವನ್ನು ತಿನ್ನುವನಂತೆ ಎನ್ನುವ ಮಾತಿನಂತೆ ಇದ್ದೆ.

ಎರಡು ಕತ್ತೆಗಳ ವಯಸ್ಸು ದಾಟಿ ಮೂರನೇ ಕತ್ತೆ ವಯಸ್ಸು ಮುಗಿಯುವ ಅಂಚಿನಲ್ಲಿದ್ದೆ.. ಜೊತೆಗೆ ಈ ಕತ್ತೆಗೆ ಒಂದು ಸುಂದರ ಕುದುರೆಯ ಜೊತೆ ಆಯಿತು.. ಮದುವೆ ಇನ್ನೇನು ಕೆಲವೇ ವಾರಗಳು ಇದ್ದವು..

ಅಂಥಹ ಒಂದು ಸುಂದರ ದಿನಗಳಲ್ಲಿ ನನ್ನ ಪ್ರೀತಿಯ ಗೆಳೆಯರು ಶಶಿ, ಲೋಕಿ, ಜೆ ಎಂ ಮತ್ತು ಅವರ ಪರಿವಾರ ಒಂದು ಹರಕೆಯ ನೆಪದಲ್ಲಿ ಯಾಣ ಮತ್ತಿತ್ತರ ತಾಣಗಳಿಗೆ ಹೋಗಬೇಕಿತ್ತು. ಹೆಬ್ಬಾಳದ ಬಳಿಯ ಸಹಕಾರನಗರದಲ್ಲಿದ್ದ ಅವನ ಮನೆಯನ್ನು ಎರಡು ಮೂರುದಿನಗಳ ಮಟ್ಟಿಗೆ ಜೋಪಾನ ಮಾಡುವ ಉಸ್ತುವಾರಿಯನ್ನು ನನಗೆ ಮತ್ತು ವೆಂಕಿಗೆ ಶಶಿ ವಹಿಸಿಕೊಟ್ಟಿದ್ದನು. ನಾವಿಬ್ಬರು ನಮ್ಮ ಕೆಲಸದ ಒತ್ತಡದ ಕಾರಣ ಅವರ ಜೊತೆಯಲ್ಲಿ ಹೋಗುವ ಪರಿಸ್ಥಿಯಲ್ಲಿರಲಿಲ್ಲ.

ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತಿದ್ದ..    ಮತ್ತು ಉಡುಗೊರೆಯಾಗಿ ಬಂದಿದ್ದ ಆ ಕಾಲದ ಸೂಪರ್ ಹಿಟ್ ಬೈಕ್ ಯಮಹ Rx ೧೦೦ ಈ ಬೈಕನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ್ದ.. ನಾನು ಮತ್ತು ವೆಂಕಿ ಇಬ್ಬರು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರಿಂದ.. ನಮಗೂ ಅನುಕೂಲವಾಗಿತ್ತು..

ಅವರೆಲ್ಲರಿಗೂ ಶುಭ ಪ್ರಯಾಣ ಹೇಳಿ.. ವೆಂಕಿ ಸೂಪರ್ ಆಗಿ ಮಾಡಿದ್ದ ಚಿತ್ರಾನ್ನ ತಿಂದು ಇಬ್ಬರು ಬೆಳಿಗ್ಗೆ ಎದ್ದು ಆಫೀಸ್ ಗೆ ಹೊರಟೆವು. ವೆಂಕಿಗೆ ಬೈಕ್ ಓಡಿಸಲು ಬರುತ್ತಿತ್ತು.. ನನಗೆ ಹಹಹಃ ಹಹಹ ಹಹಃ.. ಸ್ಟಾಂಡ್ ಹಾಕಿ ನಿಲ್ಲಿಸಿದ್ದ ಬೈಕ್ ಮೇಲೆ ಕೂರಲು ಸರಿಯಾಗಿ ಬರುತ್ತಿರಲಿಲ್ಲ.. ವೆಂಕಿ ಯಾವಾಗಲೂ ಬಯ್ಯುತ್ತಿದ್ದ ಲೋ.. ಮೊದಲು ಕ್ಲಚ್ ಯಾವುದು ಬ್ರೇಕ್ ಯಾವುದು ತಿಳ್ಕೊಳೋ ಅಂಥಾ!

ಸರಿ ಸಹಕಾರನಗರದಿಂದ ಇಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಶುರುವಾಯಿತು ನಮ್ಮ ಬೈಕ್ ಯಾತ್ರೆ.. ಇಬ್ಬರು ನಗುತ್ತಾ ನಗುತ್ತಾ ಅನಿಲ್ ಕುಂಬ್ಳೆ ವೃತ್ತದ ತನಕ ಬಂದೆವು.. ಅದು ಇದು ಮಾತಾಡುತ್ತಾ ಒಬ್ಬರಿಗೊಬ್ಬರು ರೇಗಿಸಿಕೊಳ್ಳುತ್ತಾ ಬರುತ್ತಿದ್ದೆವು.. ಕೆಂಪು ದೀಪ ನಮ್ಮ ನಾಗಾಲೋಟಕ್ಕೆ ತಡೆಯೊಡ್ಡಿತು..

ಸುಂದರ ಸ್ಪುರದ್ರೂಪಿ ನಮ್ಮ ವೆಂಕಿ.. ಅಚಾನಕ್ ಅವನ ಆಫೀಸಿನ ಬಸ್ ಕಾಣಿಸಿತು.. ಅಥವಾ ಬಸ್ಸಿನ ಕಿಟಕಿಯೊಳಗಿಂದ !@@@@@ ಕಾಣಿಸಿರಬೇಕು.. "ಶ್ರೀಕಿ ನಾನು ಬಸ್ಸಿನಲ್ಲಿ ಹೋಗುತ್ತೇನೆ.. ಸಂಜೆ ಸಿಗೋಣ" ಎಂದು ಹೇಳಿ ಆನ್ ನಲ್ಲೆ ಇದ್ದ ಬೈಕನ್ನು ಬಿಟ್ಟು ಬಸ್ ಹತ್ತೇ ಬಿಟ್ಟಾ.. ಕೆಂಪಿನಿಂದ ಹಸಿರು ಬಣ್ಣಕ್ಕೆ ಸಿಗ್ನಲ್ ಲೈಟ್ ತಿರುಗಿತು.. ಹಸಿರು ಬಣ್ಣ ನೋಡಿದ ನಾನು ಯಮನನ್ನು ನೋಡಿದ ಮಾರ್ಕಂಡೇಯನ ಹಾಗೆ ಆಗಿ ಬಿಟ್ಟಿತು ನನ್ನ (ಸುಂದರ) ಮುಖ..

ಹಿಂದೆಯಿಂದ ಹಾರನ್ ಗಳ ಸುರಿಮಳೆ.. ಕಷ್ಟ ಪಟ್ಟು ಮೊದಲ ಗೇರ್ ಗೆ ಹಾಕಿ ಟ್ರಿನಿಟಿ ಸರ್ಕಲ್ ತನಕ ಹಾಗೆ ಹೋದೆ.. ನನ್ನ ಅಕ್ಕ ಪಕ್ಕ ಬರುತ್ತಿದ್ದವರು ನನ್ನನ್ನು ಪ್ರಾಣಿಯೆನ್ನುವಂತೆ ನೋಡುತ್ತಿದ್ದರು.. ಹಾಗು ಹೀಗೂ ಟ್ರಿನಿಟಿ ಸರ್ಕಲ್ ಹತ್ತಿರ ಬಂದಾಗ ಧೈರ್ಯ ಮಾಡಿ ಸೆಕೆಂಡ್ ಗೇರ್ ಗೆ ಹಾಕಿದೆ.. ಎಲ್ಲರಿಗೂ ಗೊತ್ತಿರುವಂತೆ ಯಮಹ ಸದ್ದನ್ನು ನಿಲ್ಲಿಸಿಯೇ ಬಿಟ್ಟಿತು.. ಮುಂದೆ ಎರಡು ನಿಮಿಷ ಯಮ ಸಾಹಸಮಾಡಿದರೂ ಸ್ಟಾರ್ಟ್ ಆಗ್ತಾ ಇತ್ತೇ ಹೊರತು ಮುಂದಕ್ಕೆ ಹೋಗುತ್ತಿರಲಿಲ್ಲ.. ಕಾರಣ ನಿಮಗೆ ಗೊತ್ತೇ ಇದೆ ಗೇರ್ ನಲ್ಲಿ ಇತ್ತು.. ಕ್ಲಚ್ ಉಪಯೋಗ ಸರಿಯಾಗಿ ಗೊತ್ತಿರಲಿಲ್ಲ..  ಯಮಹ ಹರಯಕ್ಕೆ ಬಂದ ಜಿಂಕೆಯಂತೆ ನೆಗೆಯುತ್ತಿತ್ತು..

ಹಿಂದೆ ಆಟೋರಿಕ್ಷದಲ್ಲಿ ಸುಂದರ ಮೂರು ಕಾಲೇಜು ತರುಣಿಯರು.. ಮುಸಿ ಮುಸಿ ನಗುತ್ತಿದ್ದರು ನನ್ನ ಪಾಡು ನೋಡಿ.. ಅವರು ನಗುತ್ತಿದ್ದನ್ನು ನೋಡಿ ರಿಕ್ಷಾ ಚಾಲಕನಿಗೆ ಸ್ಫೂರ್ತಿ ಸಿಕ್ಕಿತು.. "ನೋಡಿ ಮೇಡಂ ಯಾರನ್ನೋ ಮೆಚ್ಚಿಸಲು ಯಾರದ್ದೋ ಬೈಕ್ ತಂದು ಬಿಡ್ತಾರೆ ಓಡಿಸೋಕೆ ಬರೋಲ್ಲ.. ಮಂಗ ಮುಂಡೇವು.. ಲೋ ಗುರು.. ಮೊದಲು ನ್ಯೂಟ್ರಲ್ ಗೇರ್ ಗೆ ತಂದು ಸ್ಟಾರ್ಟ್ ಮಾಡು ನಿಧಾನವಾಗಿ ಕ್ಲಚ್ ಬಿಡು.. ಇಲ್ಲಾ ಅಂದ್ರೆ ಇವತ್ತೆಲ್ಲ ಬಸವನಹುಳುವಿನ ತರಹ ಇಂಚು ಇಂಚು ಮುಂದಕ್ಕೆ ಹೋಗ್ತೀಯ ಅಂದಾ..ಆಟೋದಲ್ಲಿ ನಗುವಿನ ತರಂಗಗಳು.. ಬೆಂಗಳೂರು ಡಿಸೆಂಬರ್ ನಲ್ಲೂ ಮಳೆಯನ್ನು ತರಿಸುವ ಸುಂದರ ತಾಣ.. ಈ ಘಟನೆ ಫೆಬ್ರುವರಿ ಮತ್ತು ಮಾರ್ಚ್ ೨೦೦೩ ನಡುವೆ ನಡೆದದ್ದು.. ಆ ಸಮಯದಲ್ಲೂ ನನ್ನ ಮೈ ಮನಸ್ಸು ಒದ್ದೆ ಮಯ..

ಕಷ್ಟ ಪಟ್ಟು.. ಹೇಗೋ ಮೊದಲ ಅಥವಾ ಎರಡನೇ ಗೇರ್ ನಲ್ಲಿ ಹಾಗೂ ಹೀಗೂ ಹೊಸೂರು ರಸ್ತೆಗೆ ಬಂದೆ.. ಅಷ್ಟು ಹೊತ್ತಿಗೆ ಕ್ಲಚ್ ಮಂಗಾಟ ಅರ್ಥವಾಗಿತ್ತು.. ನನ್ನ ಮೊದಲ ಬೈಕ್ ಪಯಣ ಮೈ ಮನಸ್ಸನ್ನು ಒದ್ದೆ ಮಾಡಿದ್ದರೂ ನಂತರದ ಮೂರು ದಿನಗಳಲ್ಲಿ ಶಶಿಯ ಪ್ರೀತಿಯ ಬೈಕ್ ನನಗೆ ಸರಿಯಾಗಿ ಬೈಕ್ ಓಡಿಸಲು ಕಲಿಸಿಯೇ ಬಿಟ್ಟಿತು..

ಇಂದು ಆ ಬೈಕ್ ಗೆ ರಜತ ಮಹೋತ್ಸವ.. ಬೆಂಗಳೂರಿನ ಮೊದಲ ಮಾಲ್ ಸಂಸ್ಕೃತಿ ಬಿತ್ತಲು ಆರಂಭ ಎನ್ನಬಹುದಾದ  (ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಂತರ) ಅಲಂಕಾರ್ ಪ್ಲಾಜಾದಲ್ಲಿ ಉಡುಗೊರೆಯಾಗಿ ಸಿಕ್ಕಿದ ಈ ಸುಂದರ ರಜತ ಮಹೋತ್ಸವದ ಗೆಳೆಯನಿಗೆ ಶುಭಾಶಯಗಳನ್ನು ಕೋರುವುದು ನಮ್ಮೆಲ್ಲರ ಕರ್ತವ್ಯ. ನಾನು ವೆಂಕಿ ಬೈಕ್ ಓಡಿಸಲು ಕಲಿತಿದ್ದೆ ಈ ಬೈಕ್ ನಲ್ಲಿ.. ಜೊತೆಯಲ್ಲಿ ಇಂದಿಗೂ ಸುಸ್ಥಿಯಲ್ಲಿ ಇರುವ ಹಾಗು ಅಷ್ಟೇ ಆಸ್ತೆಯಿಂದ ನೋಡಿಕೊಳ್ಳುತ್ತಿರುವ ಅದರ ಸರದಾರ ಶಶಿಗೂ ಕೂಡ ಅಭಿನಂದನೆಗಳು..

ಜೊತೆಯಲ್ಲಿ ಶಶಿಗೆ ನೆರಳಾಗಿ. ಬಾಳ ಸಂಗಾತಿಯಾಗಿ ಹೆಜ್ಜೆ ಹಾಕುತ್ತಿರುವ ನಮ್ಮೆಲ್ಲರ ಪ್ರೀತಿಯ ಅಕ್ಕ "ಪ್ರತಿಭಾ" ಇವರಿಬ್ಬರ ವೈವಾಹಿಕ ನಂಟಿಗೆ ಹದಿನೈದರ ಹರೆಯ.. ಸುಮಧುರ ಗೆಳೆತನ ನಮ್ಮೆಲ್ಲರದು.. ಒಂದು ಕಾಲದಲ್ಲಿ ನಡೆದಾಡಿಕೊಂಡು ಒಬ್ಬರನ್ನು ಒಬ್ಬರು ಭೇಟಿ ಮಾಡುತ್ತಿದ್ದೆವು.. ನಂತರ ಸೈಕಲ್ ಸಿಕ್ಕಿತ್ತು.. ಆಮೇಲೆ ಮೋಟಾರ್ ಸೈಕಲ್.. ಈಗ ಕಾರಲ್ಲಿ ಓಡಾಡುವ ಶಕ್ತಿ ಇದ್ದರೂ ನಮ್ಮೆಲ್ಲರ ಗೆಳೆತನದಲ್ಲಿ ಸಂತಸ ತುಂಬಿ ಹರಿಯುತ್ತಿದೆ..

ಸೂಪರ್ ಗೆಳೆಯ ಮೃಧು ಭಾಷಿ, ಸುರ ಸುಂದರ ಶಶಿ  ಮತ್ತು  ಪತಿಯ ಸ್ನೇಹಿತರನ್ನು ತಮ್ಮಂದಿರಂತೆ ಅಣ್ಣಂದಿರಂತೆ ಅಕ್ಕರೆಯಿಂದ ಕಾಣುವ ನಮ್ಮೆಲ್ಲರ ಪ್ರೀತಿಯ ಅಕ್ಕ ಪ್ರತಿಭಾ ನಿಮಗೆ ಈ "ಗ್ರೇಟ್ BOD" ತಂಡದಿಂದ ವಿವಾಹ ವಾರ್ಷಿಕೋತ್ಸವದ ಸವಿ ನೆನಪುಗಳು.. ಪ್ರೀತಿ, ಪ್ರೇಮ, ಮಧುರ ನೆನಪುಗಳು ಇವಕ್ಕೆಲ್ಲ ಕಲಶ ಎನ್ನುವಂತೆ ನಮ್ಮ ಈ ಪುಟ್ಟ ತಂಡವನ್ನು ನಡೆಸುತ್ತಿರುವ ನಮ್ಮೆಲ್ಲರ ಅಚ್ಚು ಮೆಚ್ಚಿನ ಶಶಿ ಪ್ರತಿಭಾ ಅವರಿಗೆ ನಮ್ಮೆಲ್ಲರ ಆಭಿನಂದನೆಗಳು.. ನೂರ್ಕಾಲ ಹೀಗೆ ನಸು ನಗುತ್ತಾ ಇರಿ.. ಜೊತೆಯಲ್ಲಿ ರಜತ ಮಹೋತ್ಸವದ ಸಂತಸದಲ್ಲಿ ತೇಲುತ್ತಿರುವ ನಿಮ್ಮಿಬ್ಬರ ಸಂಗಾತಿಗೂ ಕೂಡ ಶುಭವಾಗಲಿ..

ಈ ಬೈಕ್ ನ ಇಪ್ಪತ್ತೈದು ವರ್ಷಗಳ ಒಂದು ಪಕ್ಷಿನೋಟ ನಿಮಗಾಗಿ.. ನಮ್ಮೆಲ್ಲರಿಗಾಗಿ!!!

ಅಣ್ಣ ತಮ್ಮ ಮನೆಗೆ ಬಂದ ಸಂತಸದ ಉಡುಗೊರೆಯ ಜೊತೆಯಲ್ಲಿ  -
 ಶಶಿ ಮತ್ತು ವಿಶ್ವ
(ಚಿತ್ರಕೃಪೆ - ಶಶಿ) 

ದಂಪತಿಗಳು ಎನ್ನುವ ಪದಕ್ಕೆ ಒಂದು ಉತ್ತಮ ಉದಾಹರಣೆ -
ಶಶಿ ಮತ್ತು ಪ್ರತಿಭಾ
(ಚಿತ್ರಕೃಪೆ - ಶಶಿ) 
ನಗುಮೊಗದ ಸರದಾರ ನಮ್ಮ ಶಶಿ
(ಚಿತ್ರಕೃಪೆ - ಶಶಿ) 
ಮುದ್ದು ಪುಟಾಣಿ ಶಶಿ ಪ್ರತಿಭಾ ಅವರ ಮೊದಲ "ಪ್ರತಿ"- ಸಾತ್ವಿಕ್
(ಚಿತ್ರ ಕೃಪೆ ಶಶಿ)

ಅಪ್ಪ ಎಂದರೆ ಹೀಗೆ ಇರಬೇಕು - ನಮ್ಮೆಲ್ಲರ ಮಾರ್ಗದರ್ಶಿ ಶಶಿಯ ತಂದೆ
(ಚಿತ್ರಕೃಪೆ - ಶಶಿ)  

ರಜತ ಮಹೋತ್ಸವದ ಸಂಗಾತಿಯ ಜೊತೆಯಲ್ಲಿ ಶಶಿ (ಚಿತ್ರಕೃಪೆ - ಶಶಿ) 
ನಾ ಓಡಿಸಲು ಕಲಿತ ಬೈಕ್ ಮೇಲೆ ನನ್ನ ಸ್ನೇಹಿತೆ - ಶೀತಲ್ 

(ಈ ಲೇಖನ ನಮ್ಮ ಗೆಳೆತನ ಇಪ್ಪತೆಂಟು ವಸಂತಗಳನ್ನು ಕಂಡ ಸವಿನೆನಪಿಗೆ ಈ ವರ್ಷಗಳಲ್ಲಿ ನಮ್ಮ ಜೊತೆಯಲ್ಲಿ ನಡೆದ ಸವಿ ಘಟನೆಗಳನ್ನು ದಾಖಲಿಸುವ ಒಂದು ಪುಟ್ಟ ಪ್ರಯತ್ನ)  

Wednesday, November 27, 2013

ನಗುವಿನಲ್ಲಿ ಸ್ವಾತಂತ್ರ್ಯ......!

ಭಕ್ತ ಕುಂಬಾರ ಚಿತ್ರದ ಚಿತ್ರೀಕರಣ ನಡೆಯುತ್ತಲಿತ್ತು.. ರಾಜಶಂಕರ್ ಎನ್ನುವ ಕಲಾವಿದ ಭಕ್ತ ನಾಮದೇವರ ಪಾತ್ರದಲ್ಲಿ ಅಭಿನಯಿಸುತ್ತಿದ್ದರು.. ಆಗ ಒಂದು ಸಂಭಾಷಣೆ ಹೇಳಬೇಕಿತ್ತು..

"ನನ್ನ ಅಜ್ಞಾನಕ್ಕೆ ದಿಕ್ಕಾರವಿರಲಿ.. ಅಹಂಕಾರ ತುಂಬಿ ಬರಿದಾಗಿರುವ ನನ್ನ ತಲೆಯೇ ಶಿವನಿಲ್ಲದ ಸ್ಥಳ... ಗುರುಗಳೇ ನನ್ನ ಮಹಾಪರಾಧವನ್ನು ಮನ್ನಿಸಿ.. " ಎಂದು ಹೇಳಬೇಕಿತ್ತು..

ಸುಮಾರು ಟೇಕ್ ಗಳು ಆದವು.. ಆ ಸನ್ನಿವೇಶ ಅದ್ಭುತವಾಗಿ ಚಿತ್ರದಲ್ಲಿ ಮೂಡಿಬಂದಿತ್ತು...

ಆ ಚಲನಚಿತ್ರ ನೋಡುತ್ತಾ ಕುಳಿತಿದ್ದೆ.. ಅರೆ ಹೌದಲ್ವ ನನಗೂ ಅದೇ ಅನುಭವವಾಗುತ್ತಿದೆ.. ಅಲ್ಲವೇ..

ಕರಿಘಟ್ಟ ಎಂಬ ಮಹೋನ್ನತ ಸ್ಥಳಕ್ಕೆ ಬ್ಲಾಗಿಗರ ಒಂದು ತಂಡ ದೊಡ್ಡ ಬಸ್ಸಿನಲ್ಲಿ ಹೋಗುತ್ತಿತ್ತು.. ಬನಶಂಕರಿ ಹತ್ತಿರ ಈ ಕಾರ್ಯಕ್ರಮದ ರೂವಾರಿ ಪ್ರಕಾಶಣ್ಣ ಮತ್ತು ಕೆಲ ಸ್ನೇಹಿತರು ಹತ್ತಿದರು.. ಯಾರ ಪರಿಚಯವು ಇಲ್ಲದ ನಾನು ಕಾಗೆ ಗೂಡಿನಲ್ಲಿ ಕೂತ ಕೋಗಿಲೆಯ ತರಹ ಅತ್ತಿತ್ತ ನೋಡುತ್ತಲಿದೆ..

"ಶ್ರೀಕಾಂತ್ ಮಂಜುನಾಥ್.. ನಮಸ್ಕಾರ" ಎಂಬ ಧ್ವನಿ ಕೇಳಿದಾಗ ನನಗೆ ಆಶ್ಚರ್ಯ... ಅಲ್ಲಿದ್ದ ಸಹ ಬ್ಲಾಗಿಗರಲ್ಲಿ ಪರಿಚಯ ಅನ್ನುವ ಪದ ನನಗೆ ಹೊಳೆದದ್ದು ಕೆಅವಲ ಪ್ರಕಾಶಣ್ಣನನ್ನು ನೋಡಿದಾಗ  ಮಾತ್ರ.. ಅವರನ್ನು ಬಿಟ್ಟರೆ ಮಿಕ್ಕೆಲ್ಲರೂ ಮುಖ ಪರಿಚಯ ಇಲ್ಲದ ಸಹೃದಯ ಸ್ನೇಹಿತರು... ಆದರೆ ಕೆಲವೆ ನಿಮಿಷಗಳಲ್ಲಿ ಆ "ಅಪರಿಚಿತ" ಎನ್ನುವ ಪದದಿಂದ "ಅ" ಅನ್ನುವ ಅಕ್ಷರ ನನಗೆ ಗೊತ್ತಿಲದೇ ಬಸ್ಸಿಂದ ಇಳಿದು ಹೋಯ್ತು.. :-)

ನಾಮದೇವ ಪಾತ್ರಧಾರಿ ಹೇಳಿದಂತೆ ಏನೋ ಒಂದು ರೀತಿಯ ವಿಚಿತ್ರ ಅಹಂ ಎನ್ನುವ ಭಾವ ನನ್ನಲ್ಲಿ ಇಣುಕುತಿತ್ತು.. ಅದು ಭುವಿಯೊಳಗೆ ಸೇರಿ ಹೋದದ್ದು ಒಂದು ವಿಶಿಷ್ಟ ಪ್ರತಿಭೆಯನ್ನು ಭೇಟಿ ಮಾಡಿ ಮಾತಾಡಿಸಿದಾಗ.. .. ಎಲ್ಲರೊಳು ಒಂದಾಗು ಆವಾಗ ನೀನು ಎನ್ನುವ ಭಾವ ಹೋಗಿ ನಾವೆಲ್ಲಾ ಅನ್ನುವ ಮನೋಭಾವ ಬರುತ್ತದೆ ಎನ್ನುವ ತತ್ವ ಅರಿವಾದ ರಸಮಯ ಘಳಿಗೆ ಅದು..

ಇವರ ಬಗ್ಗೆ ಏನಾದರು ಬರೆಯೋಣ ಅಂದರೆ ಪದಾರ್ಥವೇ ಚಿಂತಾ"ಮಣಿ"ಯಾಗಿಬಿಡುತ್ತದೆ..
ಹಾಸ್ಯ ಬರೆಯೋಣ ಅಂದ್ರೆ "ಬಾಟಮ್ ಪಂಚ್" ನನ್ನನ್ನು ಪಂಚ್ ಮಾಡಲು ಓಡಿ ಬರುತ್ತದೆ...
ಕವಿತೆ ಕಟ್ಟೋಣ ಅಂದ್ರೆ "ಹಾಯ್ಕು ಕಾಯ್ಕು" ಎನ್ನುತ್ತಾ ನನ್ನತ್ತಲೇ ಹಾಯಲು ನುಗ್ಗುತ್ತದೆ..
ಸುಂದರ ಹಾಡು ಹಾಡೋಣ ಅಂದ್ರೆ "ಕರೋಕೆ" ಹಾಗೆ ತೇಲಿ ಬಂದು ಕಿವಿಗೆ ಅಪ್ಪಳಿಸುತ್ತದೆ..
ಹೋಗಲಿ ಬಿಡಿ.. ಹಾಗೆ ಕೆರೆ ಕಟ್ಟೆ ಭಾವಿಯ "ಜಲನಯನ"ದಲ್ಲಿ ನಮ್ಮ ಮುಖ ನೋಡಿಕೊಳ್ಳೋಣ ಅಂದ್ರೆ  ಅಲ್ಲಿರುವ ಮೀನುಗಳೆಲ್ಲ ಮುಸಿ ಮುಸಿ ನಗುತ್ತದೆ
ತರಕಾರಿ ಸೇರಿಸಿ ಚಿತ್ರಾನ್ನ ಮಾಡೋಣ ಅಂತ ಅಡಿಗೆ ಮನೆಗೆ ನುಗ್ಗಿದರೆ.. "ಬಟಾಣಿ ಚಿಕ್ಕಿ" ಚಿಕ್ಕಿ ಬಂದ ಚಿಕ್ಕಿ ಬಂದ  ಅಂತ ಕಿಸಿ ಕಿಸಿ ಎನ್ನುತ್ತದೆ..
ಇವರೆಲ್ಲ ಗುಂಡ ಹೇಳಿದಾ ಮಾತನ್ನು ಕೇಳಿ ಬಿ. ಬಿ. ನ..(ಬಿದ್ದು ಬಿದ್ದು ನಗುವಾಗ) ನಾ ಏನು ಬರೆದರೂ ಅದು ಸರಿ ಹೋಗದು ಅಲ್ಲವೇ!!!

ಬಂಗಾರದ ಮನುಷ್ಯದ  "ನಗು ನಗುತಾ ನಲಿ ನಲಿ ಏನೇ ಆಗಲಿ" ಎಂಬ ಹಾಡಿನಂತೆ ತಾನೂ ನಕ್ಕು, ಇತರರನ್ನು ನಗಿಸಿ, ಸದಾ ನಸು ನಗುತ್ತಾ ಇರುವ ಒಂದು ಸುಂದರ ಮನಸ್ಸು ನಮ್ಮ ಆಜಾದ್ ಸರ್ ಅವರದು..

ನನ್ನ ಹೆಸರಿನ ಬಗ್ಗೆ ನನಗೆ ವಿಪರೀತ ವ್ಯಾಮೋಹ.. ಅದನ್ನು ಇನ್ನಷ್ಟು ಮೋಹಿಸುವಂತೆ "ಶ್ರೀಮಾನ್" ಎನ್ನುವ ಸುಂದರ ನಾಮಕರಣ ಮಾಡಿದ ಸಹೃದಯ ಗೆಳೆಯ ನಮ್ಮ ಆಜಾದ್ ಸರ್.. ಒಬ್ಬ ವ್ಯಕ್ತಿಯಲ್ಲಿ ಎಷ್ಟು ನಗು ಕಾಣಬಹದು, ಎಷ್ಟು ಪ್ರೋತ್ಸಾಹಕ ನುಡಿಮುತ್ತುಗಳನ್ನು ಕಾಣಬಹುದು ಅದರ ಅನ್ವರ್ಥಕ ಹೆಸರೇ ಆಜಾದ್ ಸರ್...   ಅವರಿಂದ ಕಲಿತ ಅನೇಕ ಪಾಠಗಳಲ್ಲಿ ಅನೇಕ ನಗೆ ಪ್ರಕಾರವೂ ಒಂದು...

ನಗೆಗೂ ಹಲವಾರು ಆಯಾಮಗಳು ಇರುತ್ತವೆ.. ಹೀಗೂ ನಗಿಸಬಹುದು ಎನ್ನುವ ಒಂದು ಸೂತ್ರವನ್ನು ಕಲಿತ ಆ ಕ್ಷಣ ಅತಿ ಸುಂದರವೆನಿಸಿತು.. ನಿಮಗೂ ನೋಡಬೇಕು ಅನಿಸುತ್ತಿದೆಯೇ .. ಅರೆ ಅದಕ್ಯಾಕೆ ತಡ.. ನಡೆಯಿರಿ ನಗುವಿನ ಹಲವಾರು ಸೂತ್ರಗಳನ್ನು ಕಂಡು ಬರೋಣ... ಹಾಗೆಯೇ ಬಹುಮುಖ ಪ್ರತಿಭೆಯ ಒಂದು ಸುಂದರ ಅನಾವರಣವನ್ನು ಕಂಡು ಬರೋಣ ...!

ಜಲ ನಯನ.. ಕ್ಯಾಮೇರಾ ನಯನದಲ್ಲಿ ಸೆರೆಯಾದಾಗ!!!
 ( ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲು)

ನಾ ಭವಿಷ್ಯ ಹೇಳೋಣ ಅಂತ ಬಂದ್ರೆ.. .ನನಗೆ ಜಾಕ್ ಹಾಕ್ತಾ ಇದ್ದೀರಾ
 (ಚಿತ್ರ ಕೃಪೆ - ಅಜಾದ್ ಸರ್)
ನಾ ಹೇಳೋದು ಒಸಿ ಕೇಳು ಚಂದ್ರಗುಪ್ತ - ಚಿತ್ರ ಕೃಪೆ ಅಜಾದ್ ಸರ್ 
ಕನ್ನಡದಲ್ಲಿ ಕೂಡ ಚಿತ್ರ ತೆಗೆಸಿಕೊಳ್ಳುವ ಚಾಣಕ್ಯ -
(ಚಿತ್ರಕೃಪೆ ಪ್ರದೀಪ್ ರಾವ್) 
ಬನ್ನಿ ಕನ್ನಡ ಬೇಡ ಎಂದವರಿಗೆ ಹಾಕೋಣ ಗಾಳಿ!!!
 (ಚಿತ್ರಕೃಪೆ - ಅಜಾದ್ ಸರ್)

ಎರಡು ಪ್ರತಿಭೆಗಳು.. ಅಜಾದ್ ಸರ್  ಮತ್ತು (ಜ್ಯೂ) ಅಣ್ಣಾವ್ರು
(ಚಿತ್ರಕೃಪೆ - ಅಜಾದ್ ಸರ್ )
ನೋಡ್ರಿ ಇವರು ಅಜಾದ್ ಅಂತೆ.. ನನಗಿಂತ ದಪ್ಪ ಮೀಸೆ..
ಇವರ ಬಾಯಿಗೆ ಅಜಾದಿನೇ ಇಲ್ಲಾ
 ಮೀಸೆಯೇ ತುಂಬಿ ಬಿಟ್ಟಿದೆ!!!
(ಚಿತ್ರ ಕೃಪೆ - ಆಜಾದ್ ಸರ್)

ಏನೂ ನನ್ನ ಹುಟ್ಟು ಹಬ್ಬಕ್ಕೆ ಬ್ಲಾಗ ಬಂತಾ  ಹೌದಾ.. !!!
(ಚಿತ್ರಕೃಪೆ ಅಜಾದ್ ಸರ್ )

ಶ್ರೀಮಾನ್ ಮತ್ತೆ ನನ್ನನ್ನು ಗೋಳು ಹುಯ್ದು ಕೊಳ್ಳಲು ಬಂದ್ರಾ !!!
ಇರಲಿ ಹುಟ್ಟು ಹಬ್ಬ ಮುಗೀಲಿ ಆಮೇಲಿದೆ ನಿಮಗೆ ...:-)
 (ಚಿತ್ರಕೃಪೆ - ಅಜಾದ್ ಸರ್)
ಶ್ರೀಮಾನ್ ಏನೇನೋ ಬರೆಯಲು ಹೋಗಬೇಡಿ (ಕೃಪೆ - ಅಜಾದ್  ಸರ್ )

ರಾತಿ ಹನ್ನೆರಡಕ್ಕೆ ನನಗೆ ವಿಶ್ ಮಾಡಿದ್ರ ...
ಹೌದಾ.. ಇದು ಸೂಪರ್ ಆಲ್ವಾ!!!

ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳನ್ನು ಕಂಡ ಮನಸ್ಸು ಹೀಗೆ
ಕುಣಿಯೋಣ ಅನ್ಸುತ್ತೆ ಅಂದ್ರು ಆಜಾದ್ ಸರ್
(ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲು)
ಇಂದು ಅವರ ಹುಟ್ಟು ಹಬ್ಬ.. ಇಂತಹ ಒಂದು ಸುಂದರ ಮನಸ್ಸನ್ನು ಭುವಿಗೆ ತಂದ ಆ ಮಹಾನ್ ಮಾತಾ ಪಿತೃಗಳಿಗೆ ವಂದಿಸುತ್ತಾ.. ಹಾಗೆಯೇ ಅವರ ಮನದನ್ನೆ ಮತ್ತು ದೇವರು ಕೊಟ್ಟ ವರ ಮಗಳು ಇವರ ತುಂಬು ಸಂಸಾರದಲ್ಲಿ ನಗೆ, ಸಂತಸ, ಶಾಂತಿ, ನೆಮ್ಮದಿ ಸದಾ ತುಂಬಿ ತುಳುಕುತ್ತಿರಲಿ ಎಂದು ಆಶಿಸುತ್ತಾ ಸಮಸ್ತ ಬ್ಲಾಗ್, ಫೇಸ್ ಬುಕ್ ಹಾಗೂ ಅದರ ಅನೇಕ ಹೆಸರಿಸಲಾಗದ ತಂಡಗಳ ಸದಸ್ಯರ ಪರವಾಗಿ ಅಜಾದ್ ಸರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. !!!